ಬಂಟ್ವಾಳ: ದೇಶಕ್ಕಾಗಿ ಪ್ರಾಣತೆತ್ತ ಸ್ವಾತಂತ್ರ್ಯ ಯೋಧರ ನಿಜವಾದ ಕನಸು ಮೋದಿ ಆಡಳಿತದಲ್ಲಿ ನನಸಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಶ್ರೀಕ್ಷೇತ್ರ ಮಿತ್ತಮಜಲಿಗೆ 2.50 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆಯ ಲೋಕಾರ್ಪಣೆಯ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಂಘಟನೆ, ಅಭಿವೃದ್ಧಿಯ ವಿಚಾರಧಾರೆಯ ಜೊತೆಗೆ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ , ಇತ್ತೀಚೆಗಿನ ಚುನಾವಣೆಗಳಲ್ಲಿ ಬಿಜೆಪಿ ಪರವಾದ ಫಲಿತಾಂಶಗಳೇ ಬಂದಿದ್ದು, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಡಿಕೆಶಿ, ಸಿದ್ದರಾಮಯ್ಯ ಶಪಥ ಮಾಡಿದ್ದಾರೆ,
ಅವರಿಬ್ಬರ ಇತ್ತೀಚೆಗಿನ ನಡವಳಿಕೆಗಳು, ಹೇಳಿಕೆಗಳು ಇದನ್ನುಸ್ಪಷ್ಟ ಪಡಿಸಿದೆ ಎಂದು ಅವರು ವ್ಯಂಗ್ಯವಾಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಪಾಣೆ ಮಂಗಳೂರಿನಿಂದ ನಂದಾವರ ಕೇತ್ರಕ್ಕೆ 10 ಕೋ.ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶೀಘ್ರವೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷ , ಸಂಸದ ನಳಿನ್ಕುಮಾರ್ ಕಟೀಲ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂದರ್ಭೋಚಿತವಾಗಿ ಮಾತನಾಡಿದರು.
ಸಜಿಪ ಮೂಡ ಗ್ರಾಮಪಂಚಾಯತ್ ಅಧ್ಯಕ್ಷೆ ಹರಿಣಾಕ್ಷಿ ,ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಭ್ರಮಾಚರಣೆಯ ರೂವಾರಿ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿದರು. ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ನಾಲ್ಕು ವರ್ಷದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಆಗಿರುವ ಸಮಗ್ರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು