ಛತ್ತೀಸ್ ಗಢ: ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 11 ವಾಹನಗಳಿಗೆ ನಕ್ಸಲೀಯರು ಬೆಂಕಿ ಹಚ್ಚಿರುವ ಘಟನೆ ಛತ್ತೀಸ್ ಗಢ ರಾಜ್ಯದಲ್ಲಿ ನಡೆದಿದೆ. ಕೊಂಡಗಾಂವ್ ಜಿಲ್ಲೆಯ ಧನೋರಾ ಪ್ರದೇಶದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಸ್ತೆ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದ ಟ್ರಕ್ ಗಳು, ರೋಡ್ ರೊಲರ್ಸ್ ಮತ್ತು ಟ್ರಾಕ್ಟರ್ ಗಳು ಸೇರಿದಂತೆ 11 ವಾಹನಗಳಿಗೆ ನಕ್ಸಲೀಯರು ಬೆಂಕಿ ಹಚ್ಚಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ತಿವಾರಿ ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಜಧಾನಿ ರಾಯಪುರದಿಂದ 250 ಕಿಲೋ ಮೀಟರ್ ದೂರದಲ್ಲಿರುವ ಬತ್ರಾಲಿ ಮತ್ತು ಚೆರ್ಬೆಡಾ ನಡುವೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತಿತ್ತು. ಅಲ್ಲಿಗೆ ತೆರಳಿದ ನಕ್ಸಲೀಯರ ಗುಂಪೊಂದು 11 ವಾಹನಗಳಿಗೆ ಬೆಂಕಿ ಹಚ್ಚಿರುವುದಾಗಿ ಅವರು ಹೇಳಿದ್ದಾರೆ.
ಭದ್ರತಾ ಪಡೆ ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ವಿವರ ತಿಳಿದುಬರಬೇಕಾಗಿದೆ ಎಂದು ಐಜಿ ತಿಳಿಸಿದ್ದಾರೆ.