ಉಡುಪಿಯಲ್ಲಿಂದು 109 ಮಂದಿಗೆ ಪಾಸಿಟಿವ್ ಧೃಡ: ಮೂರು ಬಲಿ..!
ಉಡುಪಿ : ಕೃಷ್ಣ ನಗರಿ ಉಡುಪಿಯಲ್ಲಿ ಹಲವು ದಿನಗಳ ನಂತರ ಒಂದೇ ದಿನ ಪಾಸಿಟವ್ ಸಂಖ್ಯೆ ಹೆಚ್ಚಾಗಿದೆ. ಇಂದು ಜಿಲ್ಲೆಯಲ್ಲಿ 109 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಧೃಡವಾಗಿದೆ.
ಈ ಮಧ್ಯೆ ಜಿಲ್ಲೆಯಲ್ಲಿ ಇಂದು 80 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 1895 ಕ್ಕೆ ಏರಿಕೆಯಾಗಿದೆ.
594 ವರದಿಗಳು ಬರಲು ಬಾಕಿ ಇವೆ. ಇಂದು 489 ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಜಿಲ್ಲೆಯಲ್ಲಿಂದು ಕೊರೊನಾಗೆ ಮೂವರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಬಲಿಯಾದವರ ಸಂಖ್ಯೆ ಎಂಟಕ್ಕೇರಿಕೆಯಾಗಿದೆ.
ಉಡುಪಿ ಮತ್ತು ಕುಂದಾಪುರಗಳಲ್ಲಿ ಇಬ್ಬರು ಸಾವನ್ನಪ್ಪಿದರೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಸೋಂಕಿತ ಉಡುಪಿಯಲ್ಲಿ ಸಾವನ್ನಪ್ಪಿದ್ದಾರೆ.
ಕುಂದಾಪುರದ ಮರವಂತೆಯ 58 ವರ್ಷ ಪ್ರಾಯದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇವರು ತೀವ್ರ ಅಸ್ತಮಾದಿಂದ ನರಳುತಿದ್ದರು. ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಕಂಡು ಬಂದಿತ್ತು. ಚಿಕಿತ್ಸೆ ಪ್ರಾರಂಭಿಸುವ ವೇಳೆಗಾಗಲೇ ಮೃತಪಟ್ಟಿದ್ದಾರೆ.
ಇನ್ನು ಅಂಕೋಲದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬೀಡಿನಗುಡ್ಡೆಯಲ್ಲಿ ಅಂಕೋಲದ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಜಿಲ್ಲಾಡಳಿತದ ವತಿಯಿಂದ ನಡೆಸಲಾಗಿದೆ.
ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಗಡಿಗಳು ಸೀಲ್ ಡೌನ್ ಮಾಡಲಾಗಿದ್ದು ಸೋಂಕನ್ನು ತ್ವರಿತ ಗತಿಯಲ್ಲಿ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಜಿಲ್ಲೆಯಲ್ಲಿ ರಾಂಡಮ್ ಟೆಸ್ಟ್ ಆರಂಭಿಸಲಾಗಿದೆ.